ಜಗನ್ನಾಥ ಪಂಡಿತರಾಜ: -
ಸು. 1590-1670. ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ಅಪಾರ ಮನ್ನಣೆಪಡೆದಿರುವ ರಸಗಂಗಾಧರವೆಂಬ ಸಂಸ್ಕøತ ಕೃತಿಯ ಕರ್ತೃ. ಈತ ಆಂಧ್ರ ದೇಶದವನೆಂದೂ ಪೆರುಭಟ್ಟ, ಲಕ್ಷ್ಮೀ-ಇವರುಗಳ ಮಗನೆಂದೂ ಈತನ ಗ್ರಂಥದಿಂದಲೇ ತಿಳಿದು ಬರುತ್ತದೆ. ವ್ಯಾಕರಣವೊಂದನ್ನು ಹೊರತು ಮಿಕ್ಕೆಲ್ಲ ಶಾಸ್ತ್ರಗಳನ್ನೂ ತನ್ನ ತಂದೆಯ ಬಳಿಯಲ್ಲಿಯೇ ಈತ ಕಲಿತನಲ್ಲದೆ ತನ್ನ ತಂದೆಗೆ ವ್ಯಾಕರಣವನ್ನು ಹೇಳಿಕೊಟ್ಟ ಶೇಷ ವೀರೇಶ್ವರನ ಬಳಿ ವ್ಯಾಕರಣಾಧ್ಯಯನ ಮಾಡಿದ.

	ಜಗನ್ನಾಥನ ಯೌವನ ಮೊಗಲ ಬಾದಶಹನ ಆಸ್ಥಾನದಲ್ಲಿ ಕಳೆಯಿತು. (ದಿಲ್ಲೀ ವಲ್ಲಭಪಾಣಿಪಲ್ಲವತಲೇ ನಿಂತಂ ನವೀನಂ ವಯಃ). ಆದರೆ ಈತ ರಾಜಸ್ಥಾನವನ್ನು ಯಾವಾಗ ಸೇರಿದನೆಂಬುದು ಸ್ಪಷ್ಟವಾಗಿಲ್ಲ. ಈತ ಜಹಾಂಗೀರನ ಕಾಲದಲ್ಲಿ ಅವನ ಆಸ್ಥಾನವನ್ನು ಸೇರಿ, ಅನಂತರ ಉದಯಪುರದ ಜಗತ್‍ಸಿಂಹನ ಆಶ್ರಯದಲ್ಲಿ ಕೆಲವು ದಿನಗಳಿದ್ದು ಮತ್ತೆ ಷಹಜಾನನ ಆಸ್ಥಾನದಲ್ಲಿ ಅನೇಕ ವರ್ಷಗಳನ್ನು ಕಳೆದು, ಅನಂತರ ಕೂಚ್ ಬಿಹಾರಿನ ಪ್ರಾಣನಾರಾಯಣನ ಆಶ್ರಯದಲ್ಲಿ ಹಲವು ದಿನಗಳಿದ್ದು ತನ್ನ ಕಡೆಯ ದಿನಗಳನ್ನು ಯಮುನಾತಟದಲ್ಲಿ ಶಾಂತರೀತಿಯಲ್ಲಿ ಕಳೆದನೆಂದು ಈತನ ಕೃತಿಗಳಿಂದ ಊಹಿಸಬಹುದು. ಇದು ಬಹುಶಃ ಕಾಲಾನುಕ್ರಮವಾಗಿರಬಹುದು. ಈತ ಯಾರಾರ ಆಶ್ರಯದಲ್ಲಿ ಎಷ್ಟೆಷ್ಟು ಕಾಲ ಇದ್ದನೆಂದು ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೂ ಈತನ ಜೀವನದಲ್ಲಿನ ಮುಖ್ಯ ಘಟ್ಟಗಳನ್ನು ಹೀಗೆ ವಿಂಗಡಿಸಬಹುದು-ಬಾಲ್ಯ, ವಿದ್ಯಾಭ್ಯಾಸ ಸು. 1590-1620. ಜಹಾಂಗೀರನ ಆಸ್ಥಾನ ಸು. 1020-27; ಉದಯಪುರದರಸ ಜಗತ್‍ಸಿಂಹನ ಆಶ್ರಯ ಸು. 1627-30; ಷಹಜನಾನನ ಆಸ್ಥಾನ ಸು. 1630-58; ಕೂಚ್ ಬಿಹಾರಿನ ದೊರೆ ಪ್ರಾಣನಾರಾಯಣನ ಆಸ್ಥಾನ ಸು. 1661-1664; ಆಮೇಲೆ ಯಮುನಾತಟದಲ್ಲಿ ಕೆಲವು ವರ್ಷಗಳ ಶಾಂತಜೀವನ ಸು. 1664-70.

	ದಾಕ್ಷಿಣಾತ್ಯನಾದ ಈತ ತನ್ನ ಬಹುಪಾಲು ಜೀವನವನ್ನು ಉತ್ತರ ಭಾರತದಲ್ಲಿಯೇ ಕಳೆದನೆಂಬುದು ಸ್ವಾರಸ್ಯವಾದ ವಿಷಯ. ತನ್ನ ಪ್ರತಿಭೆಯಿಂದ ಮೊಗಲ ಆಸ್ಥಾನದಲ್ಲಿ ಅತ್ಯಂತ ಶ್ರೇಷ್ಠಪದವಿಯನ್ನು ಈತ ಗಳಿಸಿದ. ಮುಸಲ್ಮಾನರ ಆವರಣದಲ್ಲಿ ಈ ಪಂಡಿತನಿಗೆ ದೊರೆತ ಪ್ರಾಶಸ್ತ್ಯಕ್ಕೆ ಅಸಫ್‍ಖಾನ್ ಇತ್ತ ಆಶ್ರಯ ಸಹಕಾರಿಯಾಯಿತು. ಆ ಕಾಲದಲ್ಲಿ ಮೊಗಲ ಆಸ್ಥಾನದಲ್ಲಿ ರಾಜಕೀಯ ಮುಂದಾಳಾಗಿದ್ದು ವಿದ್ಯಾವಂತನೂ ಗುಣಗ್ರಾಹಿಯೂ ಷಹಜಹಾನನ ಮಾವನೂ ಆದ ಅಸಫ್‍ಖಾನ್ ಜಗನ್ನಾಥ ಪಂಡಿತನಿಗೆ ಇತ್ತ ಪಂಡಿತರಾಜನೆಂಬ ಬಿರುದೇ ಆಸ್ಥಾನದಲ್ಲಿ ಈತನಿಗಿದ್ದ ಸ್ಥಾನಮಾನಗಳನ್ನು ಸೂಚಿಸುತ್ತದೆ. ಖಾನನಿಗೂ ಪಂಡಿತನಿಗೂ ಪರಸ್ಪರ ಗೌರವಾದರಗಳು ಬಹಳವಾಗಿದ್ದುವು. 1641ರಲ್ಲಿ ಅಸಫ್‍ಖಾನ್ ಮರಣದಿಂದ ಅತಿಯಾಗಿ ನೊಂದವರಲ್ಲಿ ಜಗನ್ನಾಥನೂ ಒಬ್ಬ. ತನ್ನ ಶೋಕವನ್ನು ಶ್ಲೋಕವೊಂದರಲ್ಲಿ ಬಣ್ಣಿಸಿ, ರಸಗಂಗಾಧರದಲ್ಲಿ ಉದಾಹರಿಸಿದ್ದಾನೆ.

	ಕಾವ್ಯಕ್ಷೇತ್ರದಲ್ಲಿ ಜಗನ್ನಾಥನ ಕೃತಿಗಳೆಲ್ಲವೂ ಸಣ್ಣ ಪ್ರಮಾಣದವು. ಆದರೂ ಸರಳ ಹಾಗೂ ಭವ್ಯವಾದ ಶೈಲಿಯಿಂದಲೂ ಸ್ಫುಟವಾದ ಶಬ್ದಜಾಲದಿಂದಲೂ ಶಾಸ್ತ್ರ ಪ್ರಕ್ರಿಯೆಯನ್ನು ಕಾವ್ಯದಲ್ಲಿ ಜೋಡಿಸುವ ಜಾಣ್ಮೆಯಿಂದಲೂ ವಿಶಾಲವಾದ ಹಾಗೂ ಆಳವಾದ ಪಾಂಡಿತ್ಯದೊಡನೆ ಸೇರಿದ ಪ್ರತಿಭೆಯಿಂದಲೂ ಜಗನ್ನಾಥ ಪಂಡಿತ ಸಂಸ್ಕøತ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲಿ ಕವಿಗಳಲ್ಲೊಬ್ಬನಾಗಿದ್ದಾನೆ.

	ದೇವತಾಸ್ತುತಿ ರೂಪವಾಗಿ ಐದು ಲಹರಿಗಳನ್ನು ಈತ ಬರೆದಿದ್ದಾನೆ. ಇವು ಭಕ್ತಿರಸದಿಂದ ತುಂಬಿ ತುಳುಕುತ್ತಿವೆ. ಇವುಗಳಲ್ಲಿ (1) ಭಗವದ್ವಿಷ್ಣುವಿನ ಕರುಣೆಯಲ್ಲಿರುವ ಕವಿಯ ಅಚಲವಾದ ನಂಬಿಕೆಯನ್ನು ಹೊರಗೆಡಹುವ ಕರುಣಾಲಹರೀ ಅಥವಾ ವಿಷ್ಣುಲಹರೀ (43 ಶ್ಲೋಕಗಳು) ಮತ್ತು (2) ಕವಿಯ ಭಕ್ತಿಗಂಗೆಯೇ ಆಗಿರುವ ಗಂಗಾಲಹರೀ (52 ಶ್ಲೋಕಗಳು)-ಇವು ಅತ್ಯುತ್ತಮವಾಗಿವೆ. ಇಂದಿಗೂ ಗಂಗಾಸ್ನಾನ ಸಮಯದಲ್ಲಿ ಉತ್ತರ ಭಾರತದ ಜನ ಗಂಗಾಲಹರಿಯನ್ನು ಪಠಿಸುತ್ತಾರೆ. (3) ಭಗವಾನ್ ಸೂರ್ಯನ ವಿಷಯದಲ್ಲಿ ರಚಿಸಲ್ಪಟ್ಟ 30 ಸ್ರಗ್ಧರಾಶ್ಲೋಕಗಳ ಮುಕ್ತಕ ಕಾವ್ಯವೇ ಸುಧಾಲಹರೀ. ಅರ್ಥಕ್ಕೂ ಶಬ್ದಕ್ಕೂ ಇರುವ ಹೊಂದಾಣಿಕೆಯ ಚಮತ್ಕøತಿಯಿಂದ ಈ ಕಾವ್ಯ ಉಜ್ಜ್ವಲವಾಗಿದೆ. (4) ಅಮೃತಲಹರಿಯಲ್ಲಿ ಯಮುನಾ ನದಿಯ ಬಗ್ಗೆ ತನಗಿರುವ ಭಕ್ತಿಯನ್ನು ಕವಿ ತೋರ್ಪಡಿಸಿದ್ದಾನೆ. (5) ಲಕ್ಷ್ಮೀಲಹರಿ 41 ಶ್ಲೋಕಗಳ ಕಾವ್ಯ. ಇದರಲ್ಲಿ ಕವಿ ಲಕ್ಷ್ಮಿಯನ್ನು ಉತ್ತಮ ಅಲಂಕಾರಿಕ ಶೈಲಿಯಲ್ಲಿ ವರ್ಣಿಸಿದ್ದಾನೆ. ಪ್ರತಿಯೊಂದು ಶ್ಲೋಕವೂ ಕವಿಯ ಭಕ್ತಿಯನ್ನು ಹೊರಸೂಸುತ್ತದೆ, ಲಕ್ಷ್ಮಿಯ ದಿವ್ಯಮಂಗಳ ರೂಪವೇ ಓದುಗರ ಕಣ್ಣುಮುಂದೆ ನಿಲ್ಲುತ್ತದೆ.

	ಜಗನ್ನಾಥ ಪಂಡಿತ ತನಗೆ ಆಶ್ರಯ ಕೊಟ್ಟವರ ಗುಣಾತಿಶಯಗಳನ್ನು ಹೊಗಳಿ ಕಾವ್ಯರಚನೆ ಮಾಡಿದ್ದಾನೆ. ಉದಯಪುರದ ಜಗತ್‍ಸಿಂಹನ ವಿಷಯಕವಾದ ಜಗದಾಭರಣ, ಕಾಮರೂಪೇಶ್ವರ ಪ್ರಾಣನಾರಾಯಣನ ವಿಷಯಕವಾದ ಪ್ರಾಣಾಭರಣಗಳನ್ನು ಇಲ್ಲಿ ಉದಾಹರಿಸಬಹುದು. ಅಲ್ಲಲ್ಲಿ ಕೆಲವು ಬದಲಾವಣೆಗಳ ಹೊರತು ಇವೆರಡೂ ಒಂದೇ ಕಾವ್ಯದಂತಿವೆ. ಈ ಕಾವ್ಯದ ಹಲವು ಶ್ಲೋಕಗಳನ್ನು ದಿಲ್ಲೀಶ್ವರ ಷಹಜಹಾನನಿಗೆ ಹೊಂದಿಕೊಳ್ಳುವಂತೆ ಬದಲಾಯಿಸಿ ತನ್ನ ರಸಗಂಗಾಧರದಲ್ಲಿ ಉದಾಹರಿಸಿದ್ದಾನೆ. ಅಸಫ್‍ವಿಲಾಸ ಆಖ್ಯಾಯಿಕಾ ಎಂಬುದು ಅಸಫ್‍ಖಾನನ ವಿಷಯದಲ್ಲಿ ಬರೆದ ಗದ್ಯಕಾವ್ಯ. ಆದರೆ ಇದರ ಪ್ರಸ್ತಾವನೆ ಮಾತ್ರ ಇಂದು ಉಪಲಬ್ಧವಾಗಿದೆ.

	ತನ್ನ ಪದ್ಯರತ್ನಗಳನ್ನು ದುಷ್ಟರು ಅಪಹರಿಸಿಯಾರೆಂಬ ಸಂಶಯದಿಂದ ಜಗನ್ನಾಥ ಅವೆಲ್ಲವನ್ನೂ ಭಾಮಿನಿ ವಿಲಾಸವೆಂಬ ಹೆಸರಿನಲ್ಲಿ ಒಂದೆಡೆ ಸೇರಿಸಿರುವುದಾಗಿ ಹೇಳಿಕೊಂಡಿದ್ದಾನೆ. ಈ ಕೃತಿಯನ್ನು ನಾಲ್ಕು ವಿಭಾಗ ಮಾಡಲಾಗಿದೆ. 1 ಅನ್ಯೋಕ್ತಿ ಅಥವಾ ಪ್ರಾಸ್ತಾವಿಕ ವಿಲಾಸ-ಅನೇಕ ಅನ್ಯಾಪದೇಶಗಳೂ ಉತ್ತಮ ನೀತಿಬೋಧಕಗಳೂ ಆದ ಮುಕ್ತಕಗಳಿಂದ ಕೂಡಿದುದು. 2 ಶೃಂಗಾರವಿಲಾಸ-ಶೃಂಗಾರರಸಪ್ರಧಾನವಾದ ಶ್ಲೋಕಗಳ ಸಂಪುಟ. 3 ಕರುಣಾವಿಲಾಸ-ನಾಯಿಕೆ ಮೃತಳಾದುದರಿಂದ ಉಂಟಾದ ನಾಯಕನ ದುಃಖವನ್ನು ವರ್ಣಿಸುವ ಶ್ಲೋಕಗಳಿಂದ ಕೂಡಿದುದು. 4 ಶಾಂತವಿಲಾಸ-ರಭಸವಾಗಿ ಮಳೆ ಬಂದು ನಿಂತ ಮೇಲೆ ಉಂಟಾಗುವ ವಾತಾವರಣದಂತೆ ಜೀವನದ ಏರಿಳಿತವೆಲ್ಲ ಮುಗಿದು ಶಾಂತವಾದ ಕವಿಯ ಮನಸ್ಸನ್ನು ಸ್ಫುಟವಾಗಿ ತೋರಿಸುವ ಶ್ಲೋಕಗಳ ಸಂಗ್ರಹ.

	ಯಮುನಾ ವರ್ಣ ವ್ಯಾಖ್ಯಾಯಿಕೆಯೆಂಬ ಗದ್ಯ ಗ್ರಂಥವೊಂದನ್ನು ರಚಿಸಿದ್ದನೆಂದು ಕವಿಯ ಮಾತುಗಳಿಂದ ವ್ಯಕ್ತವಾಗುತ್ತದೆಯಾದರೂ ಆ ಗ್ರಂಥವನ್ನೂ ದೊರೆತಿಲ್ಲ. 

	ಜಗನ್ನಾಥನಿಂದ ರಚಿತವಾದ ಗ್ರಂಥಗಳಲ್ಲಿ ಅದ್ವಿತೀಯವಾದುದು ರಸಗಂಗಾಧರ ಸಂಸ್ಕøತ ವಾಙ್ಮಯದಲ್ಲಿ ಅಲಂಕಾರಶಾಸ್ತ್ರ ಗ್ರಂಥಗಳ ಶ್ರೇಣಿಯಲ್ಲಿ ಬಹುಶಃ ಕಡೆಯ ಸ್ವತಂತ್ರ ಉದ್ಗ್ರಂಥವಿದು. ಕಾವ್ಯಮೀಮಾಂಸಾ ಶಾಸ್ತ್ರವಿಚಾರದಲ್ಲಿ ನ್ಯಾಯ ಹಾಗೂ ವ್ಯಾಕರಣಶಾಸ್ತ್ರಗಳ ತನ್ನ ಪಾಂಡಿತ್ಯವನ್ನು ಉಪಯೋಗಿಸಿಕೊಂಡಿರುವುದೇ ಈ ಗ್ರಂಥರತ್ನದ ಪ್ರೌಢಿಮೆಗೆ ಮುಖ್ಯ ಕಾರಣವಾಗಿದೆ. ಜಗನ್ನಾಥ ಅಲಂಕಾರಶಾಸ್ತ್ರ ಗ್ರಂಥಗಳನ್ನೆಲ್ಲ ಜಾಲಾಡಿ ರಸಗಂಗೆಯನ್ನು ಈ ಗ್ರಂಥದಲ್ಲಿ ಹಿಡಿದಿಟ್ಟಿದ್ದಾನೆ. ಇದರಲ್ಲಿ ಅನೇಕ ವಿಚಾರಗಳನ್ನು ವಿಮರ್ಶಿಸಿ ತನ್ನ ಮತವನ್ನು ಪ್ರಕಟಿಸಿದ್ದಾನೆ. ಉದಾಹರಣೆಗೆ-ತನ್ನ ಹಿಂದಿನ ಶಾಸ್ತ್ರಕಾರರು ಕೊಟ್ಟ ಕಾವ್ಯಲಕ್ಷಣ ಈತನಿಗೆ ಹಿಡಿಸಲಿಲ್ಲ. ಅವರ ಅಭಿಪ್ರಾಯಗಳನ್ನು ಚೆನ್ನಾಗಿ ಪರೀಕ್ಷಿಸಿ ಕಡೆಗೆ ರಮಣೀಯಾರ್ಥಪ್ರತಿಪಾದಕಃ ಶಬ್ದಃ ಕಾವ್ಯಂ ಎಂದು ತಾನೆ ಒಂದು ಲಕ್ಷಣವನ್ನು ಕೊಟ್ಟಿದ್ದಾನೆ. ಆಮೇಲೆ ಶಾಸ್ತ್ರದ ಮುಖ್ಯ ವಿಷಯವಾದ ಧ್ವನಿ ಹಾಗೂ ರಸಸೂತ್ರಗಳ ವಿಮರ್ಶೆಯಲ್ಲಿ ತೊಡಗುತ್ತಾನೆ. ಅನಂತರ ರೀತಿ ಗುಣಗಳನ್ನು ವಿಚಾರ ಮಾಡುತ್ತಾನೆ. ಈ ವಿಷಯದಲ್ಲಿ ಈತ ಆನಂದವರ್ಧನ ಅಭಿನವಗುಪ್ತರನ್ನೇ ಬಹುವಾಗಿ ಅನುಸರಿಸುತ್ತಾನೆ. ಧ್ವನಿಯ ಅನೇಕ ವಿಧಗಳನ್ನು ವಿಚಾರ ಮಾಡುತ್ತಾನೆ. ಅನಂತರ ಅಲಂಕಾರಗಳನ್ನು ವಿಮರ್ಶಿಸುತ್ತಾನೆ. ರಸಗಂಗಾಧರ ಅಪೂರ್ಣವಾಗಿದೆ. ಗ್ರಂಥದಲ್ಲಿ ಅಪ್ಪಯ್ಯ ದೀಕ್ಷಿತರ ಚಿತ್ರಮೀಮಾಂಸಾ ಗ್ರಂಥವನ್ನು ಬಹುವಾಗಿ ಖಂಡಿಸಿದ್ದಾನೆ. ಈ ಖಂಡನೆಗಳನ್ನೆಲ್ಲ ಒಟ್ಟಿಗೆ ಸೇರಿದಾಗ ಚಿತ್ರಮೀಮಾಂಸಾ ಖಂಡನವೆಂಬ ಸ್ವತಂತ್ರ ಗ್ರಂಥವೊಂದು ಲಭ್ಯವಾಗಿದೆ.

	ವ್ಯಾಕರಣಾಶಾಸ್ತ್ರದಲ್ಲಿಯೂ ಈತ ಗ್ರಂಥವೊಂದನ್ನು ರಚಿಸಿದ್ದಾನೆ. ಜಗನ್ನಾಥನ ಗುರುವಿನ ತಂದೆ ಶೇಷ ಕೃಷ್ಣ ಎಂಬಾತ ಭಟ್ಟೋಜೀ ದೀಕ್ಷಿತನಿಗೆ ಗುರುವಾಗಿದ್ದ. ಈ ದೀಕ್ಷಿತ್ ತನ್ನ ಗುರುವಿನ ಪ್ರಕ್ರಿಯಾಪ್ರಕಾಶವೆಂಬ ಗ್ರಂಥವನ್ನು ಪ್ರೌಢಮನೋರಮಾ ಎಂಬ ತನ್ನ ವ್ಯಾಖ್ಯಾನದಲ್ಲಿ ಟೀಕಿಸಿದ್ದ. ಭಟ್ಟೋಜಿ ಗುರುದ್ರೋಹಿಯೆಂದು ಬಗೆದ ಜಗನ್ನಾಥ ಪ್ರೌಢ ಮನೋರಮಾ ಕುಚಮರ್ದನವೆಂಬ ಖಂಡನ ಗ್ರಂಥವನ್ನು ಬರೆದು ಭಟ್ಟೋಜಿಯನ್ನು ಸರಿಯಾಗಿ ಪ್ರತಿಭಟಿಸಿದ. ಆದರೆ ಇದರ ಪ್ರಾರಂಭದ ಸ್ವಲ್ಪ ಭಾಗ ಮಾತ್ರ ಈಗ ಉಪಲಬ್ಧವಾಗಿದೆ. ಶಬ್ದ ಕೌಸ್ತುಭ ಶಾಣೋತ್ತೇಜನವೆಂಬ ಹೆಸರಿನಲ್ಲಿ ಭಟ್ಟೋಜಿಯ ಶಬ್ದ ಕೌಸ್ತುಭವನ್ನೂ ಈತ ಟೀಕಿಸಿದನೆಂದು ತೋರುತ್ತದೆ. ಈ ಗ್ರಂಥವೂ ದೊರೆತಿಲ್ಲ.

	ಜಗನ್ನಾಥ ತಂದೆಯಂತೆಯೇ ಚತುಃಶಾಸ್ತ್ರಗಳನ್ನು ಹೃದ್ಗತ ಮಾಡಿಕೊಳ್ಳುವುದರ ಜೊತೆಗೆ, ಅಲಂಕಾರಶಾಸ್ತ್ರವನ್ನೂ ಕರತಲಾಮಲಕ ಮಾಡಿಕೊಂಡಿದ್ದ. ಪಂಡಿತ ರಾಜನೆನಿಸಿಕೊಂಡಿದ್ದಲ್ಲದೆ, ಪದವಾಕ್ಯಪ್ರಮಾಣಪಾರವಾರಪಾರೀಣ ಎಂಬ ಬಿರುದನ್ನು ಗಳಿಸಿದ್ದ. ಶಾಸ್ತ್ರವೇತ್ತನೂ ಸುಕವಿತಾ ಸಾಮಥ್ರ್ಯವುಳ್ಳವನೂ ಆದ ಜಗನ್ನಾಥನಷ್ಟು ಖ್ಯಾತಿ ಸಂಸ್ಕøತ ಅಲಂಕಾರಶಾಸ್ತ್ರೇತಿಹಾಸದಲ್ಲಿ ಬೇರೊಬ್ಬರಿಗಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.
(ಎಸ್.ಆರ್‍ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ